Original link here.
ಇದೇನಿದು ಎಚ್1ಬಿ ವೀಸಾ ತಿದ್ದುಪಡಿ ಕಾಯ್ದೆ? ಈ ಹೊಸ ಕಾಯ್ದೆಯಿಂದ ಟೆಕ್ಕಿಗಳ ಮೇಲೆ ಆಗಬಹುದಾದ ಸಾಧಕಬಾಧಕಗಳೇನು ಎಂಬುದನ್ನು ವಿಶ್ಲೇಷಿಸಿದ್ದಾರೆ ಕಿಶೋರ್ ನಾರಾಯಣ್.
ಅಮೆರಿಕ ಡಾಲರ್ ಕನಸು ಕಾಣುತ್ತಿರುವ ಲಕ್ಷಾಂತರ ಭಾರತೀಯ ಸಾಫ್ಟ್ ವೇರ್ ಇಂಜಿನಿಯರುಗಳ ಹೃದಯದಲ್ಲಿ ಢವಢವ ಶುರುವಾಗಿದೆ. ಅಮೆರಿಕನ್ನರೆ ನಿಮಗೆ ಕೆಲಸ ಕೊಡಿಸುತ್ತೇವೆ ಎಂಬ ಭರವಸೆ ನೀಡಿ ಪ್ರೆಸಿಡೆಂಟ್ ಹುದ್ದೆಗೇರಿರುವ ಡೊನಾಲ್ಡ್ ಟ್ರಂಪ್ ಸರಕಾರ, ಭಾರತೀಯ ಟೆಕ್ಕಿಗಳ ಕನಸುಗಳಿಗೆ ಅಡ್ಡಗೋಡೆಯಾಗಿ ನಿಂತಿದೆ. ಇದಕ್ಕೆ ಕಾರಣ ಎಚ್1ಬಿ ವೀಸಾ! ಇದು ಅಮೆರಿಕದಲ್ಲಿ ಕೆಲಸ ಅರಸಿಕೊಂಡು ಹೋಗುವ ಭಾರತೀಯ ಸಾಫ್ಟ್ ವೇರ್ ಇಂಜಿನಿಯರುಗಳಿಗೆ ಸಿಗುವ ಎಂಟ್ರಿ ಪಾಸ್. ಇದೀಗ ಜಾರಿಗೆ ಬರಲಿರುವುದು ಭಾರತೀಯ ಟೆಕ್ಕಿಗಳಿಗೆ ಮಾರಕವಾಗಬಹುದಾದ ಎಚ್1ಬಿ ವೀಸಾ ಸುಧಾರಣಾ ಕಾಯ್ದೆ. ಅಮೆರಿಕಾದಲ್ಲಿ ಮಂಡಿಸಲಾಗುತ್ತಿರುವ ಎಚ್1ಬಿ ವೀಸಾ ಸುಧಾರಣಾ ಕಾಯ್ದೆಯಿಂದ ಪ್ರಪಂಚದೆಲ್ಲೆಡೆಯಿಂದ ಅಮೆರಿಕಾಕ್ಕೆ ಹೋಗಲು ಇಚ್ಛಿಸುವ ಐಟಿ ಇಂಜಿನಿಯರ್ಗಳ ಮೇಲೆ ಲಗಾಮು ಹಾಕಲಾಗುತ್ತಿದೆ. ಇದರಿಂದ ಭಾರತೀಯ ಐಟಿ ಇಂಜಿನಿಯರ್ಗಳ ಮೇಲೂ ಪ್ರಭಾವ ಬೀರಬಹುದಾಗಿದೆ.
ಎಚ್1ಬಿ ವೀಸಾ ನಿಯಮಗಳನ್ನು ಬಿಗಿಗೊಳಿಸಲು ಅಮೆರಿಕಾದ ಕಾಂಗ್ರೆಸ್ಸಿನಲ್ಲಿ ಒಂದು ಹೊಸ ಕಾಯ್ದೆಯನ್ನು ಮಂಡಿಸಲಾಗುತ್ತಿದೆ. ಇದರಿಂದ ಐಟಿ ಕ್ಷೇತ್ರದ ಉದ್ಯಮಗಳನ್ನು ಹೊರಗುತ್ತಿಗೆ ಮಾಡಲಾಗುತ್ತಿದ್ದ ಅಭ್ಯಾಸಕ್ಕೆ ಕಡಿವಾಣ ಬೀಳಬಹುದು. ಇದೇನಿದು ಎಚ್1ಬಿ ವೀಸಾ ತಿದ್ದುಪಡಿ ಕಾಯ್ದೆ? ಈ ಹೊಸ ಕಾಯ್ದೆಯಿಂದ ಟೆಕ್ಕಿಗಳ ಮೇಲೆ ಆಗಬಹುದಾದ ಸಾಧಕಬಾಧಕಗಳೇನು ಎಂಬುದನ್ನು ವಿಶ್ಲೇಷಿಸಿದ್ದಾರೆ ಕಿಶೋರ್ ನಾರಾಯಣ್.
ಎಚ್1ಬಿ ವೀಸಾ ಎಂದರೇನು?
ಅಮೆರಿಕಾ ದೇಶದಲ್ಲಿ ಇಂಜಿನಿಯರ್ ಕೆಲಸ ಮಾಡಲು ಹೋಗುವವರಿಗೆ ಎಚ್1ಬಿ ವೀಸಾ ನೀಡಲಾಗುತ್ತದೆ.
ಇದನ್ನು ಯಾರಿಗೆ ನೀಡಲಾಗುತ್ತದೆ?
ಈ ವೀಸಾವನ್ನು ಪ್ರಮುಖವಾಗಿ ಐಟಿ ಇಂಜಿನಿಯರ್ಗಳಿಗೆ ನೀಡುತ್ತಾರೆ ಅನ್ನುವುದು ಗಮನಾರ್ಹ. ಭಾರತದಲ್ಲಿ ಮಾನ್ಯಗೊಂಡ ಯಾವುದಾದರೂ ವಿಶ್ವವಿದ್ಯಾಲದಿಂದ ಇಂಜಿನಿಯರ್ ಪದವಿ ಪಡೆದಿರಬೇಕು ಅನ್ನುವುದೇ ಪ್ರಮುಖ ಅರ್ಹತೆ.
ಇದರಿಂದ ಅಮೆರಿಕಾಕ್ಕೆ ಏನು ಪ್ರಯೋಜನ?
ಅಮೆರಿಕಾದಲ್ಲಿ ಸಾಕಷ್ಟು ಐಟಿ ಕಂಪನಿಗಳಿದ್ದು ಅವುಗಳಲ್ಲಿ ಕೆಲಸ ಮಾಡಲು ಇಂಜಿನಿಯರ್ಗಳು ಬೇಕಾಗಿದ್ದಾರೆ. ಭಾರತವೂ ಸೇರಿದಂತೆ ಅನ್ಯ ದೇಶಗಳಿಂದ ಹೋದವರು ಆ ಖಾಲಿ ಹುದ್ದೆಗಳನ್ನು ತುಂಬುತ್ತಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ ಭಾರತೀಯ ಇಂಜಿನಿಯರ್ಗಳು ಅಮೆರಿಕಾದ ಆರ್ಥಿಕ ವ್ಯವಸ್ಥೆಗೆ ಸುಮಾರು 1 ಬಿಲಿಯನ್ ಡಾಲರ್ಗಳಷ್ಟು ಕೊಡುಗೆಯನ್ನು ನೀಡುತ್ತಿದ್ದಾರೆ.
ವಾರ್ಷಿಕ ಎಷ್ಟು ಎಚ್1ಬಿ ವೀಸಾಗಳನ್ನು ನೀಡಲಾಗುತ್ತದೆ?
2015 ವರ್ಷದಲ್ಲಿ ಅಮೆರಿಕಾ ದೇಶ ಬರೋಬ್ಬರಿ 1,72,748 ಇಂಜಿನಿಯರ್ಗಳಿಗೆ ಎಚ್1ಬಿ ವೀಸಾ ನೀಡಿದೆ. ಇದರಲ್ಲಿ ಶೇಕಡಾ 60ರಷ್ಟು ಭಾರತೀಯರಿಗೇ ನೀಡಲಾಗಿದೆ ಎಂಬುದು ಗಮನಾರ್ಹ.
ಈ ವೀಸಾಕ್ಕೆ ಅರ್ಜಿ ಹಾಕುವುದು ಹೇಗೆ?
ನೇರವಾಗಿ ಅಮೆರಿಕಾದಲ್ಲಿ ಕೆಲಸ ಹುಡುಕಲು ಇಚ್ಛಿಸುವುದಾದರೆ ಯಾವುದಾದರೂ ಸಲಹಾ ಕಂಪನಿಗಳ ಮೂಲಕ ಈ ವೀಸಾಕ್ಕೆ ಅರ್ಜಿ ಹಾಕಬಹುದಾಗಿದೆ. ಇದಲ್ಲದೇ ಭಾರತದಲ್ಲಿರುವ ಅನೇಕ ಐಟಿ ಕಂಪನಿಗಳು ತಮ್ಮ ಅಮೆರಿಕ ಕಕ್ಷಿಗಾರ ಕಂಪನಿಗಳ ಬಳಿ ಕಳಿಸಲೂ ಇಂಜಿನಿಯರ್ಗಳ ಪರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತದ ಯಾವ ಕಂಪನಿಗಳು ಹೀಗೆ ಅರ್ಜಿ ಸಲ್ಲಿಸುತ್ತವೆ?
ದೇಶದ ಎಲ್ಲ ಪ್ರಮುಖ ಐಟಿ ಕಂಪನಿಗಳು ಇಂಜಿನಿಯರ್ಗಳ ಪರವಾಗಿ ಅರ್ಜಿ ಸಲ್ಲಿಸುತ್ತವೆ. ಇದರಲ್ಲಿ ಇನ್ಫೋಸಿಸ್ 33,289 ಅರ್ಜಿಗಳನ್ನು ಪ್ರಸಕ್ತ ಸಾಲಿನಲ್ಲಿ ಸಲ್ಲಿಸಿದ್ದೇ ಅತಿ ಹೆಚ್ಚು.
ಈಗ ಮಂಡಿಸುತ್ತಿರುವ ಕಾಯ್ದೆಯ ಹೆಸರೇನು?
ಅಮೆರಿಕಾ ಕೆಲಸಗಳನ್ನು ಹೆಚ್ಚಿಸಿ ರಕ್ಷಿಸುವ ಕಾಯ್ದೆ. ಇದರಿಂದ ಭಾರತೀಯ ಸಾಫ್ಟ್ ವೇರ್ ಇಂಜಿನಿಯರುಗಳಿಗೆ ಮಾರಕವಾಗುವ ಸಾಧ್ಯತೆಯಿದೆ.
ಈಗ ಮಂಡಿಸುತ್ತಿರುವ ಕಾಯ್ದೆಯಲ್ಲಿರುವ ಬದಲಾವಣೆಗಳೇನು?
ಈ ಕಾಯ್ದೆಯಲ್ಲಿ ಪ್ರಮುಖವಾಗಿ ಎರಡು ಮಾರ್ಪಾಟುಗಳನ್ನು ಸೂಚಿಸಲಾಗಿದೆ. (1) ಅರ್ಜಿ ಸಲ್ಲಿಸುವ ಇಂಜಿನಿಯರ್ಗಳು ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಹೊಂದಿರಲೇಬೇಕು. (2) ತುಂಬಿಸಲಾಗುತ್ತಿರುವ ಖಾಲಿ ಹುದ್ದೆಯ ವಾರ್ಷಿಕ ಸಂಬಳ ಕನಿಷ್ಟ 1 ಲಕ್ಷ ಡಾಲರ್ಗಳಾಗಿರಬೇಕು.
ಭಾರತೀಯ ಇಂಜಿನಿಯರ್ಗಳಿಗೆ ಆಗುವ ಅನ್ಯಾಯವೇನು?
ಭಾರತದಿಂದ ಅರ್ಜಿ ಸಲ್ಲಿಸುವ ಇಂಜಿನಿಯರ್ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರ ಸಂಖ್ಯೆ ಅತಿ ಕಡಿಮೆ. ಹಾಗಾಗಿ ಭಾರತೀಯ ಕಂಪನಿಗಳಿಗೆ ಮುಂಚಿನಂತೆ ಸಲೀಸಾಗಿ ಅಮೆರಿಕಾಕ್ಕೆ ಇಂಜಿನಿಯರ್ಗಳನ್ನು ಕಳಿಸಲು ಕಷ್ಟವಾಗುತ್ತದೆ. ಅಲ್ಲದೇ ಕನಿಷ್ಠ ಸಂಬಳ ನಿಗಡಿಪಡಿಸಿರುವುದರಿಂದ ಕೇವಲ ಅನುಭವವಿರುವ ಇಂಜಿನಿಯರ್ಗಳನ್ನು ಮಾತ್ರ ಪರಿಗಣಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ಕಾಯ್ದೆ ಅಂಗೀಕರಿಸುವ ಸಾಧ್ಯತೆಗಳೇನು?
ಇದನ್ನು ಕಾಂಗ್ರೆಸ್ಸಿನ ಇಬ್ಬರು ಖಾಸಗಿ ಸದಸ್ಯರು ಮಂಡಿಸಿದ್ದಾರೆ. ಆಡಳಿತಾರೂಢ ಪಕ್ಷದವರು ಮಂಡಿಸಿಲ್ಲವಾದರೂ ಭಾವಿ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾದ ಕೆಲಸಗಳನ್ನು ಅಮೆರಿಕಾದವರಿಗೇ ನೀಡಬೇಕು ಅನ್ನುವ ಚುನಾವಣಾ ಭರವಸೆಯ ಮೇಲೆ ಗೆದ್ದಿರುವುದರಿಂದ ಈ ಕಾಯ್ದೆ ಅಂಗೀಕೃತವಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ಇದನ್ನು ನಿಲ್ಲಿಸಲು ಸಾಧ್ಯವೇ?
ಹೆಚ್ಚು ಭಾರತ ದೇಶದ ಇಂಜಿನಿಯರ್ಗಳನ್ನು ಹೊಂದಿರುವ ಅಮೆರಿಕ ಕಂಪನಿಗಳು ಇದರ ವಿರುದ್ಧ ಧ್ವನಿ ಎತ್ತಬೇಕಾಗುತ್ತದೆ. ಭಾರತ ಸರ್ಕಾರವೂ ಈ ಕಾಯ್ದೆಯಿಂದ ಅಮೆರಿಕಾಕ್ಕೇ ನಷ್ಟ ಎಂದು ಅವರ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕಾಗುತ್ತದೆ. ಕೊನೆಯದಾಗಿ ಇದೆಲ್ಲವೂ ಟ್ರಂಪ್-ಇಚ್ಛೆಯ ಮೇಲೆ ಅವಲಂಬಿಸಿರುತ್ತದೆ.
ಬ್ಲೆಸ್ಸಿಂಗ್ ಇನ್ ಡಿಸ್ಗೈಸ್
ಎಚ್1ಬಿ ವೀಸಾ ತಿದ್ದುಪಡಿ ಕಾಯ್ದೆ ಜಾರಿಯಾಗಿ ಭಾರತೀಯ ಸಾಫ್ಟ್ ವೇರ್ ಇಂಜಿನಿಯರುಗಳಿಗೆ ಕೆಲಸ ಸಿಗದೇಹೋದರೂ ಇಲ್ಲೊಂದು ಆಶಾಕಿರಣವಿದೆ. ಇದರಿಂದ ಪ್ರತಿಭಾ ಪಲಾಯನ ತಪ್ಪಿ ಪ್ರತಿಭಾವಂತ ಇಂಜಿನಿಯರುಗಳು ಇಲ್ಲಿಯೇ ಉಳಿದಂತಾಗುವುದಿಲ್ಲವೆ? ಸರಕಾರ ಉದ್ಯೋಗ ಸೃಷ್ಟಿಸಿ, ಉದ್ಯಮಕ್ಕೆ ಉತ್ತೇಜನ ನೀಡಿದರೆ, ಭಾರತಕ್ಕೂ ಲಾಭ, ಇಂಜಿನಿಯರುಗಳಿಗೂ ಲಾಭ!
Leave a Reply