ಭಾರತದ ಕ್ಷಿಪಣಿ ತಾಕತ್ತಿನ ಮುಂದೆ ಪಾಕಿಸ್ತಾನದ ಬಾಬರ್ ಬಚ್ಚಾ!

Original link here.

ಪಾಕಿಸ್ತಾನ ಸೋಮವಾರವಷ್ಟೇ ಬಾಬರ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದೆ. 450 ಕಿಲೋಮೀಟರ್ ಗಳವರೆಗೆ ಉಡಾಯಿಸಬಹುದಾದ ಈ ‘ಬಾಬರ್’ ಜಲಾಂತರ್ಗಾಮಿ(ಸಬ್ ಮರೀನ್) ಯಿಂದ ನೆಲಕ್ಕೆ ಉಡಾಯಿಸುವ ಒಂದು ಕ್ಷಿಪಣಿ. ಇದೇ ಮೊದಲ ಸಲ ಪಾಕಿಸ್ತಾನ ಇಂತಹ ಕ್ಷಿಪಣಿಯನ್ನು ಉಡಾಯಿಸಿದೆ.
ಇಂತಹ ಕ್ಷಮತೆಯುಳ್ಳ ಕ್ಷಿಪಣಿ ಹೊಂದಿರುವ ಅತಿ ಕಡಿಮೆ ದೇಶಗಳ ಪಟ್ಟಿಗೆ ಪಾಕಿಸ್ತಾನವೂ ಸೇರಿದಂತಾಗಿದೆ. ಇದರಿಂದ ಭಾರತಕ್ಕೆ ಏನಾದರೂ ತೊಂದರೆಯೆ? ನಮ್ಮ ದೇಶದ ಮೇಲೆ ದಾಳಿ ಮಾಡುವ ಸಲ್ವಾಗಿಯೇ ಪಾಕಿಸ್ತಾನ ಹಿಂದೆಂದಿಗಿಂತಲೂ ಶಕ್ತಿಶಾಲಿ ಕ್ಷಿಪಣಿಗಳನ್ನು ಕಟ್ಟುತ್ತಿದೆಯೇ? ಇಲ್ಲ, ಖಂಡಿತ ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ.

ಭಾರತ ದೇಶದ ಡಿಆರ್ ಡಿಒ ಕೈಗೊಂಡಿರುವ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿ ಕಾರ್ಯವನ್ನು ಪಾಕಿಸ್ತಾನದ ಜತೆಗೆ ಹೋಲಿಸಿದರೆ ನಾವು ಎಷ್ಟೋ ಮುಂದೆ ಇದ್ದೇವೆ. ಪಾಕಿಸ್ತಾನ ಈಗ ಉಡಾಯಿಸುತ್ತಿರುವ ಕ್ಷಿಪಣಿಗಳಿಗೆ ಸಮನಾದದ್ದನ್ನು ನಾವು 2008ರಲ್ಲೇ ಯಶಸ್ವಿಯಾಗಿ ಉಡಾಯಿಸಿದ್ದಲ್ಲದೆ, ನಮ್ಮ ಸೇನೆಯ ಬಳಕೆಗೆ ಸಿದ್ಧವಾಗಿತ್ತು.

ಉದಾಹರಣೆಗೆ, ಈಗಷ್ಟೇ ಯಶಸ್ವಿಯಾಗಿರುವ ಬಾಬರ್ ಕ್ಷಿಪಣಿ ಸುಮಾರು ಇನ್ನೆರಡು ವರ್ಷಗಳಲ್ಲಿ ಪಾಕಿಸ್ತಾನದ ಸೇನೆ ಬಳಕೆಗೆ ಸಿದ್ಧವಾದರೂ ನಮ್ಮಿಬ್ಬರ ತಂತ್ರಜ್ಞಾನದ ನಡುವಿನ ಅಂತರ ಕನಿಷ್ಠ 11 ವರ್ಷಗಳು. ಅಂದಹಾಗೆ ನಮ್ಮ ದೇಶದ ಕ್ಷಿಪಣಿಯ ಹೆಸರು ಸಾಗರಿಕಾ. 6 ಟನ್ ತೂಕದ ಸಾಗರಿಕಾ ಕ್ಷಿಪಣಿಯ ವ್ಯಾಪ್ತಿ 700 ಕಿಲೋಮೀಟರ್ ಗಳಾಗಿದ್ದು, 1 ಟನ್ ಅಷ್ಟು ತೂಕವನ್ನು ಹೊತ್ತೊಯ್ಯಬಹುದಾಗಿದೆ.
ಪಾಕಿಸ್ತಾನದ ಬಾಬರ್ ಕ್ಷಿಪಣಿಯ ತಾಕತ್ತಾಗಲಿ, ಅದು ಹೊತ್ತೊಯ್ಯಬಹುದಾದ ತೂಕದ ಬಗ್ಗೆಯಾಗಲಿ ಅಧಿಕೃತವಾದ ಮಾಹಿತಿ ದೊರೆತಿಲ್ಲ.

ಬಾಬರ್ ಅಂತರರರಾಷ್ಟ್ರೀಯ ಗುಣಮಟ್ಟಕ್ಕೆ ಸರಿತೂಗಿದಂತಿಲ್ಲ
ಬಾಬರ್ ಕ್ಷಿಪಣಿ ಮೇಲ್ನೋಟಕ್ಕೆ ಅಂತರರಾಷ್ಟ್ರೀಯ ಮಾನದಂಡಕ್ಕೆ ಸರಿತೂಗಿದಂತಿಲ್ಲ. ಪ್ರಪಂಚದಾದ್ಯಂತ ಇಂತಹ ಜಲಾಂತರ್ಗಾಮಿಯಿಂದ ಉಡಾಯಿಸುವ ಕ್ಷಿಪಣಿಗಳು ಕನಿಷ್ಠ 500-600 ಕಿಲೋಮೀಟರ್ ವ್ಯಾಪ್ತಿಯಷ್ಟಿವೆ. ಅಲ್ಲದೇ ಆ ಕ್ಷಿಪಣಿಯನ್ನು ಹಲವಾರು ಬಾರಿ ಉಡಾಯಿಸಿ ಪರೀಕ್ಷಿಸಿರಬೇಕು. ಇದೆಲ್ಲವನ್ನೂ ಸಾಧಿಸಲು ಪಾಕಿಸ್ತಾನಕ್ಕೆ ಇನ್ನೂ ಕೆಲವು ವರ್ಷಗಳು ಬೇಕಾಗುತ್ತವೆ.

ದಾಳಿ, ಪ್ರತಿದಾಳಿ, ಮೂರನೇ ದಾಳಿ
ಭಾರತ ತನ್ನ ಕ್ಷಿಪಣಿಗಳ ಬತ್ತಳಿಕೆಯಿಂದ ಪಾಕಿಸ್ತಾನದ ಎಲ್ಲ ಮೂಲೆಗಳನ್ನು ತಲುಪುವ ಕ್ಷಮತೆಯನ್ನು ಎಂದೋ ಸಾಧಿಸಿಬಿಟ್ಟಿದೆ. ದಾಳಿಯ ರೂಪದಲ್ಲಾಗಲಿ, ಪ್ರತಿದಾಳಿಯ ರೂಪದಲ್ಲಾಗಲಿ, ಮೂರನೇ ದಾಳಿಯ ರೂಪದಲ್ಲಾಗಲಿ (ಜಲಾಂತರ್ಗಾಮಿಯ ಮುಖೇನ) ಭಾರತವು ಪಾಕಿಸ್ತಾನವನ್ನು ಸಂಪೂರ್ಣ ನಾಶ ಮಾಡಬಹುದು. ಹಾಗಾಗಿ ಒಂದು ವೇಳೆ ಯುದ್ಧದ ಪರಿಸ್ಥಿತಿ ತಲೆದೋರಿದರೆ ಪಾಕಿಸ್ತಾನದ ಬಗ್ಗೆ ಭಾರತ ಹೆಚ್ಚು ಯೋಚಿಸಬೇಕಾಗಿಲ್ಲ.

ಅವಶ್ಯಕತೆಗಳು ಭಿನ್ನವಾದವು
ಆದರೆ, ಭಾರತದ ಅವಶ್ಯಕತೆಗಳು ಭಿನ್ನವಾದವು. ಹಿಂದೂ ಮಹಾಸಾಗರವನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದು, ಅದಕ್ಕೆ ಇನ್ನೂ ಹೆಚ್ಚು ಕ್ಷಮತೆಯುಳ್ಳ ಕ್ಷಿಪಣಿಗಳು ಬೇಕಾಗುತ್ತವೆ.
ಚೀನಾದತ್ತ ದೃಷ್ಟಿ
ಶಸ್ತ್ರಕ್ಕೆ ಶಸ್ತ್ರ, ಕ್ಷಿಪಣಿಗೆ ಕ್ಷಿಪಣಿ ಎಂದು ಪಾಕಿಸ್ತಾನಕ್ಕೆ ಹೇಗೆ ಭಾರತಕ್ಕೆ ಸಮನಾಗುವ ಹಂಬಲವಿದೆಯೋ ಹಾಗೆಯೇ ಭಾರತದ ಚಿತ್ತ ಚೀನಾದ ಮೇಲಿದೆ. ಪ್ರಪಂಚದ ನಾಲ್ಕನೇ ಅತಿ ದೊಡ್ಡ ರಾಷ್ಟ್ರ ಚೀನಾವಾಗಿದ್ದು, ಅದರ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ ನಮಗಿಂತ ಎಷ್ಟೋ ಮುಂದೆ ಸಾಗಿದೆ. ಚೀನಾ ತನ್ನ ಯಾವ ಮೂಲೆಯಿಂದ ಬೇಕಾದರೂ ಕ್ಷಿಪಣಿಗಳನ್ನು ಉಡಾಯಿಸಿ ಭಾರತದ ಮೇಲೆ ದಾಳಿ ಮಾಡಬಹುದಾಗಿದೆ. ಹಾಗಾಗಿ ಸುರಕ್ಷತಾ ದೃಷ್ಟಿಯಿಂದ ಭಾರತಕ್ಕೆ ತನ್ನ ಕ್ಷಿಪಣಿ ಕಾರ್ಯಕ್ರಮವನ್ನು ಇನ್ನಷ್ಟು ಬಲಗೊಳಿಸುವುದು ಅನಿವಾರ್ಯವಾಗಿದೆ.
ಅಗ್ನಿ ಕ್ಷಿಪಣಿ ಉಡಾವಣೆ
ಕಳೆದ ವಾರವಷ್ಟೆ ಭಾರತ ಅಗ್ನಿ -5 ಕ್ಷಿಪಣಿಯನ್ನು ನಾಲ್ಕನೇ ಬಾರಿ ಯಶಸ್ವಿಯಾಗಿ ಉಡಾಯಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ ಇದರ ವ್ಯಾಪ್ತಿ 5500 ಕಿಲೋಮೀಟರ್ ಆಗಿದ್ದರೂ ಚೀನೀಯರು ಇದರ ವ್ಯಾಪ್ತಿ ಬರೋಬ್ಬರಿ 8000 ಕಿಲೊಮೀಟರ್ ಎಂದು ಶಂಕಿಸಿದ್ದಾರೆ. ಹಾಗಾಗಿಯೇ ಚೀನಾ ದೇಶವು ಭಾರತವನ್ನು ಖಂಡಿಸಿ ಹೇಳಿಕೆಗಳನ್ನು ಕೊಟ್ಟಿದೆ.

ಪಾಕಿಸ್ತಾನಕ್ಕೆ ಭಾರತದ್ದೇ ಗುಂಗು

ಪಾಕಿಸ್ತಾನ ಸದಾ ಭಾರತದ ಮೇಲೆ ಮೇಲುಗೈ ಸಾಧಿಸಲು ಹಂಬಲಿಸುತ್ತಿದ್ದು, ಅದು ತನ್ನ ಬಳಿ ಇರುವ ಸಂಪನ್ಮೂಲಗಳನ್ನೆಲ್ಲ ಶಸ್ತ್ರಾಸ್ತ್ರಗಳ ಉತ್ಪಾದನೆಗೆಂದೇ ಮೀಸಲಾಗಿಟ್ಟಿದೆ. ಇದರಿಂದ ಭಾರತ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪಾಕಿಸ್ತಾನ ಇಂತಹ ಕ್ಷಮತೆಯನ್ನು ಇಂದಲ್ಲ ನಾಳೆ ಸಾಧಿಸುತ್ತದೆ ಎಂದು ಮೊದಲೇ ಊಹಿಸಿತ್ತು. ಅದಕ್ಕಾಗಿ ಮುಂಚೆಯೇ ಸಿದ್ಧತೆಯೂ ನಡೆಸುತ್ತಿದೆ.

Comments

Leave a Reply

Your email address will not be published. Required fields are marked *